ಕಾಪಾಲಿಕರು

ದಕ್ಷಿಣಭಾರತದಲ್ಲಿ ಏಳನೆಯ ಶತಮಾನದಿಂದ ಪ್ರಬಲವಾದ ಶೈವಮತದ ಒಂದು ಪಂಗಡ. ಕಂಚಿ, ತಿರುವೊಟ್ರಿಯೂರ್, ಮೇಲ್ಪಾಡಿ ಮತ್ತು ಕೊಡುಂಬಾಳೂರು ಪ್ರಾಂತ್ಯಗಳಲ್ಲಿ ಇವರು ಪ್ರಬಲರಾಗಿದ್ದಂತೆ ಶಾಸನ ಮತ್ತು ಸಾಹಿತ್ಯಗಳಿಂದ ತಿಳಿದುಬರುತ್ತದೆ. ಶಿವ ದುರ್ಗೆಯರನ್ನು ಅವರ ಉಗ್ರರೂಪವಾದ ಭೈರವ ಮತ್ತು ಚಂಡಿಯ ಹೆಸರಿನಿಂದಿವರು ಪೂಜಿಸುತ್ತಿದ್ದರು. ತಲೆಬುರುಡೆಗಳ (ಕಪಾಲ) ಮಾಲೆ ಧರಿಸಿ ಒಂದು ಕಪಾಲವನ್ನೇ ಭಿಕ್ಷಾಪಾತ್ರೆಯನ್ನಾಗಿ ಉಪಯೋಗಿಸುತ್ತಿದ್ದುದರಿಂದ ಇವರಿಗೆ ಈ ಹೆಸರು ಬಂದಿತು. ಅದೇ ಬುರುಡೆಯನ್ನು ಇವರು ನೀರು ಕುಡಿಯಲೂ ಬಳಸುತ್ತಿದ್ದರು. ಮಹೇಂದ್ರವರ್ಮ ಪಲ್ಲವನ ಮತ್ತ ವಿಲಾಸಪ್ರಹಸನ ಮತ್ತು ಭವಭೂತಿಯ ಮಾಲತೀಮಾಧವ ಕೃತಿಗಳಲ್ಲಿ ಈ ಪಂಥದ ಒಂದು ಇಣುಕುನೋಟ ದೊರೆಯುತ್ತದೆ. ಮದ್ಯ ಮತ್ತು ಹೆಣ್ಣುಗಳಿಗೆ ಪ್ರಾಶಸ್ತ್ಯವಿತ್ತಿದ್ದ ಈ ಮತದಲ್ಲಿ ಆಧುನಿಕ ದೃಷ್ಟಿಯಲ್ಲಿ ಕೀಳೆಂದು ಪರಿಗಣಿಸಲ್ಪಡುವ ಅನೇಕ ದುರಾಚಾರಗಳೂ ದುಷ್ಟಸಂಪ್ರದಾಯಗಳೂ ಬಳಕೆಯಲ್ಲಿದ್ದುವು.           

(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ